Friday, January 16, 2009

ಕಸ್ತೂರಿ ರಂಗನ್ ಸಂದರ್ಶನ

ಈಗಷ್ಟೇ ಲೋಕಸಭಾ ಚ್ಯಾನೆಲ್ ನಲ್ಲಿ ಕಸ್ತೂರಿ ರಂಗನ್ ಅವರೊಂದಿಗೆ ನಡೆಯುತ್ತಿದ್ದ ಸಂದರ್ಶನ ನೋಡಿ - ಕೇಳಿ ಅದರ ವಿವರವನ್ನು ತಿಳಿಸಬೇಕೆನ್ನುವ ಉತ್ಸಾಹದಿಂದ ಈ ಬರಹ. ಮಂಡನೆಯ ಶೈಲಿ, ವಿಷಯ ಸ್ಪಷ್ಟತೆ, ಭಾಷೆಯ ಮೇಲಿನ ಹಿಡಿತ,.. ಎಲ್ಲವೂ ಅನನ್ಯ. ಅಭಿಮಾನ ಹುಟ್ಟುವಂತಿತ್ತು. ವಿಕ್ರಮ್ ಸಾರಾಭಾಯಿ, ಹೋಮಿಭಾಭಾ ನಾಲ್ಕು ದಶಕಗಳ ಹಿಂದೆ ಕಂಡ ಕನಸನ್ನು ಅವರು ಎಳೆಳೆಯಾಗಿ ಬಿತ್ತರಿಸಿದರು. ಸಾರಾಭಾಯಿ ಹಟಾತ್ತನೆ ನಿರ್ಗಮನವಾದಾಗ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ ಸತೀಶ್ ಧಾವನ್ ಅವರನ್ನು ವ್ಯೋಮ ವಿಜ್ಞಾನ ಸಂಸ್ಥೆಯ ನಿರ್ದೇಶಕರನ್ನಾಗಿ ಆರಿಸಿದ್ದನ್ನು ಹೇಳಿದ ಕಸ್ತೂರಿ ರಂಗನ್ ಅವರು ಪರಿಪೂರ್ಣತೆಯ ಸಾಕಾರವಾಗಿದ್ದರೆಂದರು - perfectionist to the core. ಅವರ ಭೇಟಿಯಾದಾಗಲೆಲ್ಲ ಮುಖ್ಯ ವಿಷಯಕ್ಕೆ ಬರುವ ಮುನ್ನ ಹತ್ತು ಹಲವು ಮೂಲಭೂತ ಪ್ರಶ್ನೆಗಳನ್ನು ಎಸೆಯುತ್ತಿದ್ದರಂತೆ. ಕೇವಲ ತಂತ್ರಜ್ಞಾನವಷ್ಟೇ ಅಲ್ಲ, ವಿಜ್ಞಾನದ ಎಲ್ಲ ವಿಭಾಗಗಳ ಸೂಕ್ಷ್ಮ ಸಂವೇದನೆ ಅವರಿಗಿತ್ತೆಂದರು. ಒಂದು ಸಂಸ್ಥೆಯ ವರಿಷ್ಠ ಎಲ್ಲ ವಿಷಯಗಳನ್ನು ಅರ್ಥೈಸಿಕೊಳ್ಳುವ ಆಸ್ಥೆ ಆ ಸಂಸ್ಥೆಯನ್ನು ಪರಿಪೂರ್ಣತೆಯ ಕಡೆಗೆ ಒಯ್ಯುತ್ತದೆನ್ನುವುದಕ್ಕೆ ಇಸ್ರೋ ನಿದರ್ಶನವೆಂದದರು. ಸಹಜವಾಗಿಯೇ ಚಂದ್ರಯಾನದ ಅಗತ್ಯದ ಬಗ್ಗೆ ಸಂದರ್ಶನದಲ್ಲಿ ಪ್ರಶ್ನೆ ಬಂದಾಗ ಕಸ್ತೂರಿ ರಂಗನ್ ಹೇಳಿದರು " ಚಂದ್ರಯಾನ ನಮ್ಮ ಅಸ್ಮಿತೆಯ ಸಾಕಾರ. ನಾವು ಸಂಕೀರ್ಣವಾದ ತಂತ್ರಜ್ಞಾನದಲ್ಲಿ ನೈಪುಣ್ಯತೆಯನ್ನು ಸಾಧಿಸಿದ್ದೇವೆಂದು ಸಾರುವ ಮೂಲಕ ಸಾವಿರಾರು ಎಳೆಯರಲ್ಲಿ ವಿಜ್ಞಾನದ ಬಗ್ಗೆ ಉತ್ಸಾಹ ಹುಟ್ಟಿಸುವಲ್ಲಿ ಇದು ಸಫಲವಾಗಿದೆ. ಹಲವು ತಂತ್ರಜ್ಞಾನ ಕ್ಷೇತ್ರಗಳು ಇದರಿಂದ ಭವಿಷ್ಯದಲ್ಲಿ ಪ್ರವರ್ಧಿಸಲಿವೆ. ಭವಿಷ್ಯದಲ್ಲಿ ವ್ಯೋಮಯೋಜನೆಗಳು ಇನ್ನಷ್ಟು ವಿಸ್ತರಣೆಯಾಗುವ ಸಂದರ್ಭದಲ್ಲಿ ಅದರಲ್ಲಿ ಪಾಲೊಳ್ಲಲಿರುವ ರಾಷ್ಟ್ರಗಳಿಗೆ ನಮ್ಮ ತಾಕತ್ತಿನ ತಾಣವನ್ನು, ವಿಜ್ಞಾನ-ತಂತ್ರಜ್ಞಾನಗಳ ಪ್ರೌಢಿಮೆಯನ್ನು ಮನವರಿಕೆ ಮಾಡಿಕೊಟ್ಟು ನಮ್ಮದಾದ ಹಕ್ಕನ್ನು ಕೇಳಲು ಇಂಥದೊಂದು ಸಾಹಸ ಅಗತ್ಯವಾಗಿತ್ತು. ನಾವು ಸಾಧಿಸಿದ್ದೇವೆ" ವ್ಯೋಮ ಯೋಜನೆಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕಸ್ತೂರಿ ರಂಗನ್ ವಿವರವಾದ ಮಾಹಿತಿ ನೀಡಿದರು. ನಮ್ಮ remote sensing - ದೂರ ಸಂವೇದಿ ಉಪಗ್ರಹಗಳ ಕಾರ್ಯಕ್ಷಮತೆ ಬಗ್ಗೆ, ಅವುಗಳ ಸಾಧನೆ ಬಗ್ಗೆ ವಿವರಣೆ ನೀಡಿದರು. ಐಟಿ/ಬಿಟಿ ಯಿಂದ ತೊಂದರೆಯಾಗುತ್ತಿದೆಯೇ ಎಂದು ಕೇಳಿದಾಗ ಅವರು ನಸು ನಗುತ್ತ ಹೇಳಿದರು - "ನಮಗೆ ಲಕ್ಷಾಂತರ ಮಂದಿ ಬೇಕಾಗಿಲ್ಲ. ಬೇಕಾಗಿರುವುದು ಕೆಲವು ಸಾವಿರ ಮಾತ್ರ. ಅಷ್ಟನ್ನು ಪಡೆಯಲು ಈ ಬೃಹತ್ ರಾಷ್ಟ್ರಕ್ಕೆ ಕಷ್ಟವಾಗದು. ಐಐಟಿ, ಇಂಡಿಯನ್ ಇನ್ಸ್ಟಿಟೂಟ್ ಆಫ್ ಸೈನ್ಸ್, TIFR ಮತ್ತು ಸ್ಥಾಪನೆಯಾಗುತ್ತಿರುವ ಹೊಸ ವಿಜ್ಞಾನ ಸಂಸ್ಥೆಗಳು ಪ್ರತಿಭಾನ್ವಿತರನ್ನು ನೀಡುತ್ತಿವೆ. ಹೊರಗಿನ ನಮ್ಮವರೂ ಕೈಜೋಡಿಸುತ್ತಾರೆ. ಹಾಗಾಗಿ ಪ್ರತಿಭಾ ಪಲಾಯನ ಅಂಥ ದೊಡ್ದ ಸಮಸ್ಯೆಯಲ್ಲ" ಸಂಜೆಯ ಹೊತ್ತಿನಲ್ಲಿ ಆಲಿಸಿದ ಈ ಸಂದರ್ಶನ ತೃಪ್ತಿಯ ಅನುಭವ ನೀಡಿತು.
ಎ.ಪಿ.ರಾಧಾಕೃಷ್ಣ

No comments:

Post a Comment